Friday, November 24, 2023

ಅವಿಸ್ಮರಣೀಯ ಕುಮಾರ ಪರ್ವತ ಚಾರಣ @ 61

         ಈ ತಿಂಗಳು  ಮೇಘಾಲಯ ಶಿಲ್ಲಾಂಗ್ ಯೂತ್ ಹಾಸ್ಟಲ್ ವತಿಯಿಂದ ಚಾರಣಕ್ಕೆ ಹೋಗ ಬೇಕಾಗಿರುವುದರಿಂದ, ಇದಕ್ಕೆ ಮುನ್ನ ಒಂದು ಕಷ್ಟಕರವಾದ ಟ್ರೆಕ್ಕಿಂಗ್ ಮಾಡಬೇಕೆಂದು ನಿರ್ಧರಿಸಿದಾಗ ತಕ್ಷಣ ಹೊಳೆದದ್ದು ಕುಮಾರ ಪರ್ವತ. ಸುಮಾರು ಹತ್ತು ವರ್ಷಗಳ  ಹಿಂದೆ ಚೀನಿ, ವೀಣಾ, ಚಿನ್ಮಯ, ಯಾಗಿ, ಆಶು ಜೊತೆ ಮಾಡಿದ ಚಾರಣ ಅನುಭವ ಮರೆಯಲಾಗದ್ದು. ಇಂತಹ ಚಾರಣವನ್ನು ಮತ್ತೊಮ್ಮೆ ಮಾಡಬೇಕೆಂದು ನಿರ್ಧಾರ ಮಾಡಿ ತಾರೀಕು 3-11-2023 ರಂದು ರೈಲಿನಲ್ಲಿ ಸುಬ್ರಹ್ಮಣ್ಯಕ್ಕೆ ಹೊರಟೆವು. 

ಮುಂಜಾನೆ ಸುಬ್ರಹ್ಮಣ್ಯ ತಲುಪಿ ಹೋಟೆಲಿನಲ್ಲಿ ತಿಂಡಿ ತಿಂದು ಸುಮಾರು 8 ಘಂಟೆ ಗೆ ಫಾರೆಸ್ಟ್ ಆಫೀಸ್ ಅನ್ನು ತಲುಪಿದೆವು. ನಮ್ಮ ಮುಂದೆ ಸುಮಾರು ನಾನೂರು ಜನ ಸಾಲಾಗಿ ನಿಂತಿದ್ದರು.  ನಮ್ಮ ಬ್ಯಾಗ್ ಗಳನ್ನು  ಪರಿಶೀಲಿಸಿದ ನಂತರ ನಮ್ಮ ಚಾರಣ ಆರಂಭವಾಯಿತು.

ದುರ್ಗಮವಾದ ಕಡಿದಾದ ದಾರಿ ಕಲ್ಲುಗಳು, ಬಂಡೆಗಳ ಮೇಲೆ ನಿಧಾನವಾಗಿ ಸಾಗುತ್ತಾ ಹೊರಟೆವು. ಹವಾಮಾನ ತಂಪಾದ ಕಾರಣ ಜಿಗಣಿಗಳ ಕಾಟ ದಾರಿ ಉದ್ದಕ್ಕೂ ಹೆಚ್ಚಾಗಿತ್ತು. ಮೂರು ಕಿಲೋಮೀಟರ್ ನಡೆದ ನಂತರ, ಭೀಮನ ಬಂಡೆಯನ್ನು ತಲುಪಿದೆವು.  ಕಾಲುಗಳು ತೀವ್ರವಾಗಿ ನೋಯುತ್ತಿತ್ತು.  ಅಲ್ಲಿಯೇ ಪಕ್ಕದಲ್ಲಿ ಒಂದು ಚಿಕ್ಕ ವಾಟರ್ ಫಾಲ್ಸ್ ನಲ್ಲಿ ಕೈ ಕಾಲು ಮುಖ ತೊಳೆದುಕೊಂಡು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಚಾರಣವನ್ನು ಮುಂದುವರೆಸಿದೆವು.

ಒಂದು ಕಿಲೋ ಮೀಟರ್ ನಡೆದ ಮೇಲೆ ಆಗಿದ್ದು ರೋಮಾಂಚನದ  ಅನುಭವ. ಕುಮಾರ ಪರ್ವತದ ಸುತ್ತಮುತ್ತಲಿನ ಪರ್ವತಗಳ ಶ್ರೇಣಿಯ ರಮ್ಯ ಮನೋಹರ ದೃಶ್ಯವನ್ನು ಕಂಡು ಮೈ ಮನ ಪುಳಕಿತವಾಯಿತು.  ನಮ್ಮ ಆಯಾಸವೆಲ್ಲಾ ಮರೆತು ಖುಷಿಯಿಂದ ನಿಧಾನವಾಗಿ ಪ್ರಕೃತಿಯನ್ನು ನೋಡಿ ಸವಿಯುತ್ತಾ ಭಟ್ಟರ ಮನೆಯನ್ನು ನಾಲ್ಕು ಘಂಟೆಗಳ ಸುಧೀರಘ    ಪ್ರಯಾಣದ ನಂತರ ಸೇರಿದಾಗ ಆದ ಸಂತಸದ ಅನುಭವ ಮರೆಯಲಾಗದ್ದು.   

ಗಿರಿಗದ್ದೆ  ಭಟ್ಟರು ನಮ್ಮನ್ನು ನಗು ಮುಖದಿಂದ ಸ್ವಾಗತಿಸಿ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದರು. ನಂತರ ತಣ್ಣೀರು ಸ್ನಾನ ಮಾಡಿ ಭಟ್ಟರ ಕೈಯಿಂದ  ಬಿಸಿ ಬಿಸಿ ಅಡುಗೆ ಊಟ ಮಾಡಿದಾಗ ಏನೋ ಒಂದು ತರಹದ ಸಾಧನೆ ಮಾಡಿದ ಅನುಭವ ಆಯಿತು.

ಅಂದು ಸಾಯಂಕಾಲದ ವೇಳೆಗೆ ಸುಮಾರು ಐನೂರು ಜನರು ಭಟ್ಟರ ಮನೆಗೆ ಬಂದು ಸೇರಿದ್ದರು.  ಅವರಿಗೆಲ್ಲ ಟೆಂಟ್ ವ್ಯವಸ್ಥೆ ಆಯಿತು. ನಾವು ಭಟ್ಟರ ಮನೆಗೆ ಒಂದು ರೂಮಿನಲ್ಲಿ ಉಳಿದು ಕೊಂಡೆವು. ನಂತರ ಸಂಜೆ ಮಳೆ ಶುರುವಾಗಿ ಸತತವಾಗಿ ಇಡೀ ರಾತ್ರಿ ಬರುತ್ತಾ ಇತ್ತು.  ಎಷ್ಟೇ ಗಲಾಟೆ  ಇದ್ದರೂ ಆಯಾಸವಾಗಿದ್ದರಿಂದ ಒಳ್ಳೆಯ ನಿದ್ದೆ ಬಂದು ರಾತ್ರಿ ಕಳೆದದ್ದೇ ಗೊತ್ತಾಗಲಿಲ್ಲ.

ಮುಂಜಾನೆ ಎದ್ದು ಚಿತ್ರಾನ್ನ, ಅಕ್ಕಿತರಿ ಉಪ್ಪಿಟ್ಟು ತಿಂದು ಭಟ್ಟರ ಮನೆಯಿಂದ ಹೊರಟು ಫಾರೆಸ್ಟ್ ಚೆಕ್ ಪೋಸ್ಟ್ ನಲ್ಲಿ ಎಂಟ್ರಿ ಮಾಡಿ ಮೇಲೆ ಹತ್ತಲು ಪ್ರಾರಂಭಿಸಿದೆವು. ಕಲ್ಲು ಮಂಟಪದವರೆಗೆ ದಾರಿ ಸುಗಮವಾಗಿತ್ತು. ಪ್ರಕೃತಿಯ ಸುಂದರ ದೃಶ್ಯವನ್ನು ಅಸ್ವಾದಿಸುತ್ತಾ ನಮ್ಮಿಂದ ಕೆಳಗೆ ಚಲಿಸುವ ಮೋಡಗಳ ದೃಶ್ಯವನ್ನು ಸವಿಯುತ್ತಾ ಬೆಟ್ಟವನ್ನು ನಿಧಾನವಾಗಿ ಹತ್ತಲು ಆರಂಭಿಸಿದೆವು.

ಸುಮಾರು ಮೂರು ಕಿಲೋ ಮೀಟರ್ ನಷ್ಟು steep inclination.  ಸದ್ಯ ಹವಾಮಾನ ನಮ್ಮ ಚಾರಣಕ್ಕೆ ಪ್ರತೀಕೂಲವಾಗಿತ್ತು. ಎರಡೂವರೆ ಗಂಟೆಗಳ ಚಾರಣದ ಬಳಿಕ ಶೇಷ ಪರ್ವತ ವನ್ನು ತಲುಪಿದೆವು. ಸ್ವಲ್ಪ ಕಾಲ ವಿಶ್ರಾಂತಿ ತೆಗೆದುಕೊಂಡು ನಂತರ ಒಂದು ಕಿಲೋ ಮೀಟರ್ ಕಾಡು ರಸ್ತೆಯಲ್ಲಿ ಸಾಗಿದ ನಂತರ, ಸಿಕ್ಕಿದ್ದು ದೊಡ್ಡ ಬಂಡೆ.  

ಬಂಡೆ ಬಹಳ ಜಾರುತಿತ್ತು.  ಒಬ್ಬರ ಕೈ ಒಬ್ಬರು ಹಿಡಿದುಕೊಂಡು ನಿಧಾನವಾಗಿ ಬಂಡೆ ಏರಿದೆವು. ತುತ್ತ ತುದಿಯಲ್ಲಿ ಬಂಡೆ ಜಾರಿಕೆ ಜಾಸ್ತಿಯಾಗಿ ಮೈ ಎಲ್ಲ ನಡುಕ ಶುರುವಾಯಿತು. ಅಧೈರ್ಯದಿಂದ ಒಂದು ಕ್ಷಣ ವಾಪಸ್ಸು ಬರುವ ಮನಸಾಯಿತು.  ಕೆಳಗೆ ನೋಡಿದರೆ ಪ್ರಪಾತ, ಸ್ವಲ್ಪ ಜಾರಿದರೂ ನಾವು ಉಳಿಯುವ ಲಕ್ಷಣಗಳೇ  ಇಲ್ಲ. 

ಧೈರ್ಯ ಮಾಡಿ ನಿಧಾನವಾಗಿ ಮೆಲ್ಲ ಮೆಲ್ಲನೆ ಏರಿ ಕುಮಾರ ಪರ್ವತದ ತುತ್ತ ತುದಿಯನ್ನು ತಲುಪಿದಾಗ ಆದ ಆನಂದ ಅಷ್ಟಿಷ್ಟಲ್ಲ.   ಮಂಜಿನಲ್ಲಿ Hampta pass (Himayalan trek) ತಲುಪಿದಾಗ ಆದ ಆನಂದದ  ಅನುಭವ ಮರುಕಳಿಸಿತು.  

ಅಲ್ಲಿ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಅಲ್ಲಿದ್ದ ಮಲ್ಲಿಕಾರ್ಜುನ ಸ್ವಾಮಿ ಯ ದರ್ಶನ ಮಾಡಿ, ವಾಪಸ್ಸು ಬಂಡೆಗಳ ಮೇಲೆ ಇಳಿಯಲು ಆರಂಬಿಸಿದೆವು.  ಕಾಡಿನ ರಸ್ತೆಯಲ್ಲಿ ಸಾಗಿ ಶೇಷ ಪರ್ವತವನ್ನು ಸೇರಿದೇವು. 

ಇಲ್ಲಿಂದ ಶುರುವಾಯಿತು ನಮ್ಮ ಕಷ್ಟಗಳ ಸರಮಾಲೆ. ಮಳೆಯು ಶುರುವಾಗಿ ಜೋರಾಯಿತು. 10 ವರ್ಷಗಳ ಹಿಂದಿನ ಅನುಭವ ಜ್ಞಾಪಕಕ್ಕೆ ಬಂತು. ಯಾಗ್ನಿಕನನ್ನು ಬೆನ್ನ ಹಿಂದೆ ಕೂಡಿಸಿ ಕೊಂಡು ಬೆಟ್ಟವನ್ನು ಇಳಿಯುವಾಗ ಜಾರಿ ಬಿದ್ದು ಕಾಲು twist  ಆಗಿ ಆಗಾಧ ವಾದ ನೋವಿನ ಪ್ರಕರಣ ಜ್ಞಾಪಕಕ್ಕೆ ಬಂತು.

ಆಗ ಸುಮಾರು ಎಂಟು ಘಂಟೆಗಳು ಕುಂಟುತ್ತಾ ತೆವಳುತ್ತಾ, ಸೋನು, ಚೀನಿ, ವೀಣಾ ಸಹಾಯದಿಂದ ರಾತ್ರಿ ಒಂಬತ್ತು ಘಂಟೆಗೆ ಫಾರೆಸ್ಟ್ ಗೆಸ್ಟ್ ಹೌಸ್ ಗೆ ತಲುಪಿದ್ದು, ದಾರಿಯಲ್ಲಿ ಫಳ  ಫಳ ಹೊಳೆಯುತ್ತಾ ಇರುವ baison ನೋಡಿದ್ದು, ನೋವಿನಿಂದ ರಾತ್ರಿ ಸರಿಯಾಗಿ ನಿದ್ರೆ ಮಾಡದೆ  ಒದ್ದಾಡಿದ್ದು, ವೀಣಾ ಕೈ ನಿಂದ ರೇಖಿ ಚಿಕಿತ್ಸೆ ಮಾಡಿಕೊಂಡಿದ್ದು, ಎಲ್ಲವೂ ಜ್ಞಾಪಕಕ್ಕೆ ಬಂದು, ನಡುಕ ಶುರುವಾಯಿತು. 

ಅತಿ ಜಾಗರೂಕತೆಯಿಂದ ನಿಧಾನವಾಗಿ ಇಳಿಯುತ್ತಾ ಇದ್ದಾಗ ಮಳೆ ಜಾಸ್ತಿ ಆಯಿತು.  ಆದರೂ ಧೈರ್ಯಗೆಡದೆ ವೀಣಾ ಹೇಳಿಕೊಟ್ಟ ಧನ್ವಂತರಿ ನಾಮತ್ರಯ ಅಷ್ಟಾಕ್ಷರೀ ಮಂತ್ರವನ್ನು ಉಚ್ಚರಿಸುತ್ತ ನಿಧಾನವಾಗಿ ಇಳಿದು ಭಟ್ಟರ ಮನೆಗೆ ಸಂಜೆ ನಾಲ್ಕು ಘಂಟೆಗೆ ಸೇರಿದೆವು.  ಆಗ ಆದ ಅನುಭವ, ಸಮಾಧಾನ, ಖುಷಿ ಮರೆಯಲು ಅಸಾಧ್ಯ.

ಅರವತ್ತೊಂದನೇ ವಯಸ್ಸಿನಲ್ಲಿ ಏನೋ ಒಂದು ಅದ್ಭುತ ಸಾಧನೆ ಮಾಡಿದೆ ಎಂಬ ಅನಿಸಿಕೆ.  ಇಡೀ ರಾತ್ರಿ ಮಳೆಯ ಆರ್ಭಟ ಹೆಚ್ಚಾಗಿತ್ತು. ಮುಂಜಾನೆ ಎದ್ದು ತಿಂಡಿ ತಿಂದು ಸ್ವಲ್ಪ ಭಟ್ಟರ ಜೊತೆ ಹರಟೆ ಹೊಡೆದೆವು. ಭಟ್ಟರ ನಮಗೆ ಬೇಗ ಹತ್ತಿರವಾದರು. ಅವರ ಅಡುಗೆ ಕೆಲಸದಲ್ಲಿ ಸ್ವಲ್ಪ ನೆರವಾದೆವು.  ಮನೆಯಲ್ಲ ಕಸ ಗುಡಿಸಿ ಸ್ವಛ  ಮಾಡಿದಾಗ ಅವರಿಗೆ ಬಹಳ ಆನಂದವಾಯಿತು.  ಅವರು ತಮ್ಮ ಜೀವನದ ಅನುಭವಗಳನ್ನು, ನಮ್ಮೊಡನೆ ಹಂಚಿಕೊಂಡರು.

ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ನಂತರ ಅವರಿಗೆ ವಿದಾಯ ಹೇಳಿ ಕೆಳಗೆ ಇಳಿಯಲು ಪ್ರಾರಂಭ ಮಾಡಿದೆವು. ರಾತ್ರಿ ಇಡೀ ಮಳೆ ಬಿದ್ದ ಕಾರಣ ದಾರಿ ತುಂಬಾ ಜಾರುತಿತ್ತು. ಎರಡೂ ಕಾಲುಗಳು ನಡುಗುತಿತ್ತು.  ಚಿಕ್ಕ ಚಿಕ್ಕ ಹೆಜ್ಜೆಗಳನ್ನು ಇಡುತ್ತಾ  ಮಧ್ಯಾಹ್ನ ಎರಡು ಘಂಟೆಗೆ ಕುಕ್ಕೆ ಸುಬ್ರಹ್ಮಣ್ಯ ತಲುಪಿದೆವು. ರಭಸವಾಗಿ ಹರಿಯುತ್ತಾ ಇದ್ದ ಕುಮಾರ ಧಾರಾ ನದಿಯಲ್ಲಿ ಸ್ನಾನ ಮಾಡಿ ಸುಬ್ರಹ್ಮಣ್ಯ ದೇವರ  ದರ್ಶನ ಮಾಡಿ,  ದೇವಸ್ಥಾನದ ಪ್ರಾಕಾರದಲ್ಲಿ ರುದ್ರ ಪಠಣ ಮಾಡಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದೆವು.

ಇನ್ನು ಎಲ್ಲಾ ನೆನಪುಗಳು. ಎರಡನೇ ಬಾರಿಗೆ ಮಾಡಿದ ಕುಮಾರ ಪರ್ವತ ಚಾರಣ, ಜೀವನದಲ್ಲಿ ಮರೆಯಲಸಾಧ್ಯ.  ಅರವತ್ತೊಂದರ ಇಳಿ ವಯಸ್ಸಿನಲ್ಲಿ, ಈ ಚಾರಣ ಸಂಪೂರ್ಣ ಯಶಸ್ವಿಯಾಗಲು ಕಾರಣಕರ್ತನಾದ ದೇವರಿಗೆ ಆನಂತಾನಂತ  ವಂದನೆಗಳು.     

ಎಸ್. ವೆಂಕಟಕೃಷ್ಣ (ಕಿಟ್ಟಿ), ಬೆಂಗಳೂರು (ನಿವೃತ್ತ ಟೆಲಿಕಾಂ ಅಧಿಕಾರಿ)          

1 comment:

Anonymous said...

ಎಷ್ಟು ಒಳ್ಳೆಯ ಅನುಭವಗಳನ್ನು ಹಂಚಿಕೊಂಡಿರುವ ನನ್ನ ತಮ್ಮನಿಗೆ ಶುಭಾಶಯಗಳು