*ಹೊನ್ನಾಳಿಯ ಅಧಿಕ ಮಾಸದ ಶ್ರೀಮಹಾಲಕ್ಷ್ಮಿಯ ಪೂಜೆ*
"ಅಧಿಕಸ್ಯ ಫಲಂ ಅಧಿಕ ಮಾಸಂ" ಎಂದು ಹೇಳುವಂತೆ ಅಧಿಕ ಫಲಗಳಿಂದ (ಹಣ್ಣುಗಳಿಂದಲೂ ಸಹ) ಈ ಬಾರಿಯ ಅಧಿಕ ಮಾಸ ಹೊನ್ನಾಳಿಯ ಮಹಿಳೆಯರ ಜೊತೆ ಸಾಂಗೋಪಾಂಗವಾಗಿ ನೆರೆವೇರಿತು. ಅಧಿಕ ಮಾಸ ಶುರುವಾಗುತ್ತಿದ್ದ ಹಾಗೆ ಪೂರ್ವ ನಿಗದಿಯಾಗಿದ್ದ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಹೊರಟೆ. ಬೆಂಗಳೂರಿಗೆ ಬಂದ ನಂತರ, ವಿಪರೀತ ಶೀತ ಕೆಮ್ಮು ನೆಗಡಿ ಜೊತೆಗೆ ಜ್ವರದಲ್ಲಿ ಮಲಗಿದೆ. ಹೊನ್ನಾಳಿಗೆ ಬಂದ ನಂತರವೂ ಮಧ್ಯೆ ಮಧ್ಯೆ ಕ್ಲಾಸುಗಳಿದ್ದ ಕಾರಣ ನಾನು ಭಾಗವಹಿಸಿದ್ದು ಕೆಲವೇ ದಿನಗಳು ಮಾತ್ರ. ಅದರ ಅನುಭವಗಳನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ.
ಗಣಪತಿ ಪೆಂಡಾಲ್ ಒಂದು ತಿಂಗಳು ಸಂಪೂರ್ಣವಾಗಿ ಶ್ರೀಮಹಾಲಕ್ಷ್ಮಿಯ ಪೂಜೆಗೆ ಎಲ್ಲಾ ಮಹಿಳೆಯರಿಂದ ಶ್ರದ್ಧಾ ಭಕ್ತಿಯಿಂದಲ್ಲದೆ ವಿಶೇಷ ಪರಿಶ್ರಮದಿಂದ ಸಜ್ಜಾಯಿತು. ಸಡಗರವೋ ಸಡಗರ. ಒಂದೊಂದು ದಿನ ಒಬ್ಬೊಬ್ಬ ಮನೆಯವರ ಪೂಜೆ ಮೊದಲೇ ಬುಕಿಂಗ್ ಆದ ಕಾರಣ ಅವರವರ ಸರದಿಯ ಪ್ರಕಾರ ಅವರವರ ಭಾವಕ್ಕೆ ತಕ್ಕಂತೆ ಸಾಗಿತು.
33 ದೇವರನಾಮಗಳು ಒಬ್ಬರು ಬರೆದರೆ, ಮತ್ತೊಬ್ಬರು ಅದರ ಪ್ರತಿಗಳನ್ನು ಎಲ್ಲರಿಗೂ ಹಂಚುವ ಸೇವೆ. ಅಲಂಕಾರಕ್ಕಾಗಿ ಕೆಲವರು ವಸ್ತುಗಳನ್ನು ಪೂಜೆಗಾಗಿ ಇಟ್ಟರೆ, ಇನ್ನು ಕೆಲವರು ಪೂಜೆಯಾದ ನಂತರ ವಿತರಣಿಯ ಸೇವೆ.
ಪ್ರತಿ ದಿನವೂ ವಿಶೇಷವಾದ ರಂಗೋಲಿಯ ಅಲಂಕಾರ, ದೀಪಾಲಂಕಾರ, ಹೂವಿನ ಅಲಂಕಾರಗಳಿಂದ ಅಚ್ಚುಕಟ್ಟಾಗಿ ಸಜ್ಜಾಗುತ್ತಿದ್ದಳು ನಮ್ಮ ಲಕ್ಷ್ಮೀದೇವಿ. ಎಲ್ಲಾ ಮಹಿಳೆಯರು ಉತ್ಸಾಹ ಭರಿತರಾಗಿದ್ದು ಒಂದು ಪೂರ್ಣ ಮಾಸವು ಮದುವೆಯ ಸಡಗರದಂತೆ ಸಜ್ಜಾಗಿ ನಲಿಯುತ್ತಿದ್ದರು.
ದೇವರನಾಮಗಳನ್ನು ಗೋಷ್ಠಿಯಲ್ಲಿ ಹಾಡುವ ಸಂಭ್ರಮ. ಮಧ್ಯೆ ಮಧ್ಯೆ ಪ್ರತ್ಯೇಕವಾಗಿ ಲಲನೆಯರಿಂದ ಪುಸ್ತಕದಲ್ಲಿದ್ದ ಉಗಾಭೋಗ ದೇವರನಾಮಗಳು ಹೊರಕ್ಕೆ ಬಂದವು. ಇನ್ನು ದೇವರನಾಮ ಹಾಡಿದ ಮೇಲೆ ಪೂಜೆ, ತದ ನಂತರ ಆರತಿ. ಆರತಿಗೆ ಸುವಾಸಿನಿಯರು ತಂಡ ತಂಡವಾಗಿ ಸುಸಜ್ಜಿತವಾಗಿ ಬಂದು ಮಹಾಲಕ್ಷ್ಮಿಗೆ ಆರತಿ ಬೆಳಗುತ್ತಿದ್ದರೆ, ಲಕ್ಷ್ಮೀದೇವಿಯು ಮಂದಹಾಸದಿಂದ ಸ್ವೀಕರಿಸುತ್ತಿದ್ದ ಹಾಗೆ ಕಾಣುತ್ತಿತ್ತು.
ಕೊನೆಯಲ್ಲಿ ಎಲ್ಲರಿಗೂ ಪ್ರಸಾದ, ಫಲತಾಂಬೂಲ ಸಮರ್ಪಣೆ ಮಾಡುವದಕ್ಕೆ ವನಿತೆಯರನ್ನು ಸಹಾಯಕ್ಕೆ ಕೋರಬೇಕಾದ ಪ್ರಸಂಗವೇ ಇಲ್ಲ. ಸ್ವತಃ ಲಲನೆಯರೇ ತಮ್ಮ ಸಹಾಯಹಸ್ತವನ್ನು ಚಾಚಿ ಪೂರೈಸುತ್ತಿದ್ದರು.
ದಾನಗಳಲ್ಲಿ ಬಗೆಯ ಬಗೆಯ ಅಧಿಕ ಮಾಸದ ದೇವತಾ ಪೂಜೆಯ ವಸ್ತುಗಳನ್ನು ದಾನ ಮಾಡಿ ಅಧಿಕ ಫಲಗಳಿಗೆ ಅರ್ಹರಾಗುವಂತೆ ನಿವೇದಿಸಿದರು. ಹೊನ್ನಾಳಿಯ ಎಲ್ಲಾ ಸುವಾಸಿನಿಯರು ಸುಮಾರು 60 ಜನ ಹೆಂಗಸರಿಗೆ ಫಲತಾಂಬೂಲಾದಿಗಳನ್ನು ಸಮರ್ಪಿಸಿರುತ್ತಾರೆ. ನನಗೆ ಈ ಬಾರಿ ಸಿಕ್ಕಿದ್ದು ನನ್ನ ಭಾಗ್ಯವೇ ಸರಿ.
ಅಧಿಕ ಮಾಸದ ಕೊನೆಯ ದಿನ ದಂಪತಿಗಳಿಗೆ ವಸ್ತ್ರ ದಾನ, ಫಲತಾಂಬೂಲಾದಿಗಳೊಂದಿಗೆ ಜ್ಞಾನ ಭಾರತಿ ಮಂಡಳಿಯ ವತಿಯಿಂದ ಸಮರ್ಪಿಸಿದರು.
ಹೀಗೆ ಹೊನ್ನಾಳಿಯ ಅಗ್ರಹಾರ, ಕೋಟೆ ಬೀದಿಯ, ಕುಟುಂಬ ವರ್ಗದವರೆಲ್ಲ ಸೇರಿ ಆಚರಿಸಿದ ಅಧಿಕ ಮಾಸದ ಶ್ರೀಮಹಾಲಕ್ಷ್ಮೀದೇವಿಯ ಪೂಜೆ ಅತ್ಯಂತ ವಿಜೃಂಭಣೆಯಿಂದ ಸಾಗಿತೆಂದರೆ ಅತಿಶಯೋಕ್ತಿಯಾಗಲಾರದು.

No comments:
Post a Comment